ಟೀಮ್‌ ಇಂಡಿಯಾದ ಅಂತಿಮ ದಿನದ ಗೇಮ್‌ಪ್ಲ್ಯಾನ್‌ ರಿವೀಲ್‌ ಮಾಡಿದ ಶಮಿ!

0
5
ಹೊಸದಿಲ್ಲಿ: ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ಹಣಾಹಣಿಯ ಆರನೇ ದಿನವಾದ ಬುಧವಾರ ಏನು ಬೇಕಾದರೂ ನಡೆಯಬಹುದು. ಹಾಗಾಗಿ, ನಾವು ಸಾಧ್ಯವಾದಷ್ಟು ರನ್‌ಗಳನ್ನು ಗಳಿಸಬೇಕಾಗಿದೆ ಎಂದು ಹಿರಿಯ ವೇಗಿ ಹೇಳಿದ್ದಾರೆ.

ಸೌಥ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಐದನೇ ದಿನ ಶಮಿ ಮಾರಕ ಬೌಲಿಂಗ್‌ ದಾಳಿ ನಡಸಿದ್ದರು. ಇದರ ಫಲವಾಗಿ ಮೊದಲಾವಧಿಯಲ್ಲಿಯೇ ಪಂದ್ಯದ ದಿಕ್ಕು ಸಂಪೂರ್ಣವಾಗಿ ಬದಲಾಯಿತು. ಸೀಮ್‌ ಹಾಗೂ ಲೆನ್ತ್‌ ಮೂಲಕ ದಾಳಿ ನಡೆಸಿದ್ದ ಮೊಹಮ್ಮದ್‌ ಶಮಿ ಮಂಗಳವಾರ 4 ವಿಕೆಟ್‌ಗಳನ್ನು ಕಬಳಿಸಿ ನ್ಯೂಜಿಲೆಂಡ್ 249ಕ್ಕೆ ಆಲೌಟ್‌ ಮಾಡಲು ಭಾರತಕ್ಕೆ ನೆರವಾಗಿದ್ದರು.

ಪಂದ್ಯದ ಬಳಿಕ ಸ್ಪೋರ್ಟ್ಸ್‌ಕೀಡಾ ಜೊತೆ ಮಾತನಾಡಿದ ಶಮಿ, “ಟೆಸ್ಟ್ ಪಂದ್ಯದಲ್ಲಿ ಎಷ್ಟು ಓವರ್‌ಗಳಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಇಂಗ್ಲೆಂಡ್‌ ನಂತಹ ಪರಿಸ್ಥಿತಿಗಳಿಲ್ಲಿ ಏನು ಬೇಕಾದರೂ ನಡೆಯಬಹುದು. ಹಾಗಾಗಿ, ಪೂರ್ವಯೋಜನೆ ಮಾಡುವ ಮೂಲಕ ನೀವು ತಂಡವನ್ನು ಆಲೌಟ್‌ ಮಾಡಲು ಸಾಧ್ಯವಿಲ್ಲ,” ಎಂದು ತಿಳಿಸಿದರು.

ಶಮಿ ಮಾರಕ ದಾಳಿಯ ಹೊರತಾಗಿಯೂ ನ್ಯೂಜಿಲೆಂಡ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 32 ರನ್‌ಗಳ ಅಲ್ಪ ಮುನ್ನಡೆ ಪಡೆಯಿತು. ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಭಾರತ ತಂಡ 5ನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡು 32 ರನ್‌ ಮುನ್ನಡೆ ಗಳಿಸಿದೆ. ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ(8*) ಹಾಗೂ ಚೇತೇಶ್ವರ್‌ ಪೂಜಾರ(12*)ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಬುಧವಾರ ಭಾರತ ತಂಡ ಗೆಲ್ಲಲಿದೆಯೇ ಅಥವಾ ಪಂದ್ಯ ಡ್ರಾ ಆಗುಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಮಿ, ಮಳೆಯಿಂದಾಗಿ ಪಂದ್ಯದ ಬಹುತೇಕ ಸಮಯ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಯೋಚಿಸಲು ನಮಗೆ ಸಮಯವಿಲ್ಲ. ಆದರೆ, ಇರುವ ಸಮಯದಲ್ಲಿ ಪಂದ್ಯದ ಗೆಲುವಿಗೆ ಸಾಧ್ಯವಾದಷ್ಟು ಪ್ರಯತ್ನ ನಡೆಸಬೇಕಾಗಿದೆ ಎಂದರು.

“ತಂಡ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಏಕೆಂದರೆ ಈಗಷ್ಟೇ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದೇವೆ. ಮೊದಲು ಸಾಧ್ಯವಾದಷ್ಟು ರನ್‌ಗಳನ್ನು ಕಲೆಹಾಕಿ ಆಮೇಲೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗಾಗಲೇ ಮಳೆಯಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಗಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಚಿಂತೆ ಮಾಡಲೂ ನಮಗೆ ಸಮಯವಿಲ್ಲ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ರನ್‌ಗಳನ್ನು ಗಳಿಸಿ ನ್ಯೂಜಿಲೆಂಡ್‌ಗೆ ಸವಾಲು ನೀಡುತ್ತೇವೆ,” ಎಂದು ಮೊಹಮ್ಮದ್ ಶಮಿ ಹೇಳಿದರು.

ವೇಗಿಗಳ ಸ್ನೇಹಿ ವಿಕೆಟ್‌ ಆಗಿರುವ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚಿನ ರನ್‌ಗಳ ಗುರಿಯು ನ್ಯೂಜಿಲೆಂಡ್‌ಗೆ ಸವಾಲುದಾಯಕವಾಗಬಹುದು. ಹಾಗಾಗಿ, ಬುಧವಾರ ಭಾರತ ತಂಡ ಆದಷ್ಟು ಬೇಗ ಹೆಚ್ಚಿನ ರನ್‌ಗಳನ್ನು ಕಲೆಹಾಕಿ, ನ್ಯೂಜಿಲೆಂಡ್‌ಗೆ ಬ್ಯಾಟಿಂಗ್‌ ಕೊಡಬೇಕು ಹಾಗೂ ಬೌಲರ್‌ಗಳು ಮಾರಕ ದಾಳಿ ನಡೆಸಿ ಆದಷ್ಟು ಬೇಗ ಆಲೌಟ್‌ ಮಾಡಲು ಪ್ರಯತ್ನಿಸಬೇಕಾಗಿದೆ.

LEAVE A REPLY

Please enter your comment!
Please enter your name here