ಮಲೆನಾಡಿಗೆ ಥಂಡಿ ಹಿಡಿಸಿದ ಧಾರಾಕಾರ ಮಳೆ; ಜೋಗದಲ್ಲಿ ರಾರಾಜಿಸಿದ ಶರಾವತಿಯ ಸೌಂದರ್ಯ

0
3
ಶಿವಮೊಗ್ಗ: ಸತತ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಜಿಲ್ಲೆಗೆ ಥಂಡಿ ಹಿಡಿಸಿದೆ.

ಬುಧವಾರ ರಾತ್ರಿಯಿಂದ ಮಳೆಯ ತೀವ್ರತೆ ಮತ್ತಷ್ಟು ಅಧಿಕವಾಗಿದ್ದು ಗುರುವಾರ ಇಡೀ ದಿನ ಬಿಟ್ಟೂ ಬಿಡದಂತೆ ಸುರಿಯಿತು. ಆದರೆ, ಯಾವುದೇ ಅನಾಹುತಗಳು ಸಂಭವಿಸಿಲ್ಲ. ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯಿತು. ಜೋರು ಮಳೆಯಿಂದಾಗಿ ನದಿಗಳ ನೀದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಕಾಡಿನೊಳಗೆ ಹಳ್ಳಗಳೂ ಭೋರ್ಗರೆಯುತ್ತಿವೆ. ಇದರಿಂದ ಜಲಪಾತಗಳಿಗೆ ಮತ್ತೆ ಜೀವ ಬಂದಿದೆ. ಜೋಗ ಜಲಪಾತದಲ್ಲಿ ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಕವಲುಗಳ ಮೂಲಕ ಶರಾವತಿಯು ಪ್ರಪಾತಕ್ಕೆ ಧುಮ್ಮಿಕ್ಕುತ್ತಿದೆ.

ಹುಲಿಕಲ್‌ನಲ್ಲಿ ಬಾಳೆಬರೆ ಜಲಪಾತ, ಆಗುಂಬೆ ಸಮೀಪದ ಬರ್ಕಣ ಜಲಪಾತ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಎಲ್ಲ ಜಲಪಾತಗಳಲ್ಲಿ ಜಲಧಾರೆಯು ಹಾಲ್ನೊರೆ ಉಕ್ಕಿಸುತ್ತಿದೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ಕಡಿವಾಣ ಹಾಕಿರುವುದರಿದ ಪ್ರವಾಸಿಗರಿಗೆ ಈ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ಇಲ್ಲವಾಗಿದೆ. ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಕ್ಕೆ ತಲಾ ಒಂದೂವರೆ ಅಡಿ ನೀರು ಬಂದಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 31,676 ಕ್ಯೂಸೆಕ್‌ಗೆ, ಭದ್ರಾ ಜಲಾಶಯದ ಒಳಹರಿವು 12,557 ಕ್ಯೂಸೆಕ್‌ಗೆ, ಮಾಣಿ ಜಲಾಶಯದ ಒಳಹರಿವು 3,898 ಕ್ಯೂಸೆಕ್‌ಗೆ ಏರಿಕೆಯಾಗಿದೆ. ತುಂಗಾ ಜಲಾಶಯಕ್ಕೆ 34ಸಾವಿರ ಕ್ಯೂಸೆಕ್‌ ನೀರು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಆಗುಂಬೆಯಲ್ಲಿ ಅತಿಹೆಚ್ಚು 181 ಮಿ.ಮೀ., ಲಿಂಗನಮಕ್ಕಿಯಲ್ಲಿ172, ಮಾಸ್ತಿಕಟ್ಟೆಯಲ್ಲಿ 135ಮಿ.ಮೀ., ಹುಲಿಕಲ್‌ನಲ್ಲಿ113 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಪ್ರಕಾರ ಹೊಸನಗರದಲ್ಲಿ 320 ಮಿ.ಮೀ., ತೀರ್ಥಹಳ್ಳಿಯಲ್ಲಿ77, ಸಾಗರ 56, ಸೊರಬ 48, ಭದ್ರಾವತಿ 16, ಶಿಕಾರಿಪುರ 15 ಮತ್ತು ಶಿವಮೊಗ್ಗದಲ್ಲಿ10 ಮಿ.ಮೀ. ಮಳೆಯಾಗಿದೆ.

LEAVE A REPLY

Please enter your comment!
Please enter your name here