ಯೋಗಿ ಸರ್ಕಾರದ ಇಮೇಜ್‌ಗೆ ಕೋವಿಡ್ ಕೊಳ್ಳಿ..! ‘ವರ್ಚಸ್ಸು ವೃದ್ಧಿ’ಗೆ ದಿಲ್ಲಿ ದಂಡನಾಯಕರ ಟಾನಿಕ್..!

0
8
ಲಖನೌ (): ಉತ್ತರ ಪ್ರದೇಶದಲ್ಲಿ ಕೋವಿಡ್‌ ಬಿಕ್ಕಟ್ಟು ನಿಭಾಯಿಸುವ ವಿಷಯದಲ್ಲಿ ಯೋಗಿ ಆದಿತ್ಯನಾಥ್‌ ಸರಕಾರದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದು, ವರಿಷ್ಠರನ್ನು ಕಳವಳಕ್ಕೆ ದೂಡಿದೆ.

ಮುಂದಿನ ವರ್ಷ ವಿಧಾನಸಭೆ ಎದುರಿಸಲಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ಇಂಥದ್ದೊಂದು ವ್ಯತಿರಿಕ್ತ ಬೆಳವಣಿಗೆ ಹೈಕಮಾಂಡ್‌ ಪಾಲಿಗೆ ನುಂಗಲಾಗದ ತುತ್ತಾಗಿದೆ. ಪರಿಸ್ಥಿತಿ ಅವಲೋಕನ ಮಾಡಿ, ಸೂಕ್ತ ‘ಚಿಕಿತ್ಸೆ’ ನೀಡುವ ಸಲುವಾಗಿ ಕೇಂದ್ರ ವರಿಷ್ಠರ ತಂಡ ಲಖನೌಗೆ ಧಾವಿಸಿದ್ದು, ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ಮತ್ತು ಕೇಂದ್ರ ಮಾಜಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಸೋಮವಾರದಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಠಿಕಾಣಿ ಹೂಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಇಬ್ಬರು ಡೆಪ್ಯುಟಿ ಸಿಎಂಗಳ ಜತೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ನಿರ್ವಹಣೆ ವೈಫಲ್ಯ ಕಾರಣ ಮುಖ್ಯಮಂತ್ರಿ ಹಾಗೂ ಅವರ ಇಬ್ಬರು ಡೆಪ್ಯುಟಿಗಳ ಬದಲಾವಣೆಯಾಗಲಿದೆ ಎನ್ನುವ ವದಂತಿ ಎದ್ದಿತ್ತು. ಆದರೆ, ಇದನ್ನು ದಿಲ್ಲಿ ವರಿಷ್ಠರು ತಳ್ಳಿಹಾಕಿದ್ದಾರೆ. ‘ರಾಜ್ಯದ ಕೋವಿಡ್‌ ನಿರ್ವಹಣೆ ಸ್ಥಿತಿಗತಿಯನ್ನಷ್ಟೇ ವರಿಷ್ಠರು ಅವಲೋಕನ ಮಾಡಿ, ಸಲಹೆ ನೀಡಿದ್ದಾರೆ. ಸವಾಲುಗಳನ್ನು ಎದುರಿಸುವ ಬಗ್ಗೆಯೂ ಸರಕಾರಕ್ಕೆ ಮಾರ್ಗದರ್ಶನ ಮಾಡಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಗಂಗಾ ನದಿಯಲ್ಲಿ ಸೋಂಕಿತರ ಶವಗಳು ತೇಲಿದ ಬಳಿಕ ರಾಜ್ಯದ ಕೋವಿಡ್‌ ಬಿಕ್ಕಟ್ಟಿನ ಬಗ್ಗೆ ಜನಾಕ್ರೋಶ ಸ್ಫೋಟಗೊಂಡಿತ್ತು. ಏತನ್ಮಧ್ಯೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಈ ಎಲ್ಲಾ ವ್ಯತಿರಿಕ್ತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ಕೇಂದ್ರ ವರಿಷ್ಠರ ತಂಡ, ಇಮೇಜ್‌ ಮರು ದುರಸ್ತಿಯ ಸರ್ಕಸ್‌ ನಡೆಸಿದೆ.

LEAVE A REPLY

Please enter your comment!
Please enter your name here