36ನೇ ವಸಂತಕ್ಕೆ ಪದಾರ್ಪಣೆ ಮಾಡಿದ ದಿನೇಶ್‌ ಕಾರ್ತಿಕ್‌!

0
2
ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಅತ್ಯುತ್ತುಮ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರಾಗಿರುವ ದಿನೇಶ್‌ ಕಾರ್ತಿಕ್ ಅವರು ಇಂದು(ಮಂಗಳವಾರ) 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಜನುಮ ದಿನಕ್ಕೆ ಹಾಲಿ-ಮಾಜಿ ಕ್ರಿಕೆಟಿಗರು ಸೇರಿದಂತೆ ಅಪಾರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಶುಭ ಕೋರಿದ್ದಾರೆ.

1985ರ ಜೂನ್‌ 1 ರಂದು ತಮಿಳುನಾಡಿನ ತೋತುಕುಡಿಯಲ್ಲಿ ಜನಿಸಿದ್ದ ಅವರು ಬರೋಡಾ ಹಾಗೂ ತಮಿಳುನಾಡು ಪರ ದೇಶಿ ಕ್ರಿಕೆಟ್‌ ಆಡಿದ್ದಾರೆ. ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ ದೊಡ್ಡ ಹೆಸರು ಮಾಡಿದ್ದ ದಿನೇಶ್‌ ಕಾರ್ತಿಕ್‌ ಅವರು 2004 ಸೆ. 6 ರಂದು ಇಂಗ್ಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ನಂತರ ಇದೇ ವರ್ಷ ನ. 3 ರಂದು ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ದಿನೇಶ್‌ ಕಾರ್ತಿಕ್‌ 26 ಟೆಸ್ಟ್ ಪಂದ್ಯಗಳಿಂದ 1,025 ರನ್‌, 94 ಓಡಿಐ ಪಂದ್ಯಗಳಿಂದ 1,752 ರನ್‌ ಹಾಗೂ 32 ಟಿ20 ಪಂದ್ಯಗಳಿಂದ 399 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 203 ಪಂದ್ಯಗಳಿಂದ 3946 ರನ್‌ಗಳನ್ನು ದಾಖಲಿಸಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿಗೂ ಮೊದಲು ಭಾರತ ಪ್ರತಿನಿಧಿಸಿದ್ದ ದಿನೇಶ್‌ ಕಾರ್ತಿಕ್‌ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳು ಆಡಲು ಸಾಧ್ಯವಾಗಲಿಲ್ಲ. ಏಕೆಂದರೆ ಕಾರ್ತಿಕ್‌ಗಿಂತ ಅದ್ಭುತ ವಿಕೆಟ್‌ ಕೀಪಿಂಗ್‌ ಕೌಶಲ ಎಂಎಸ್‌ ಧೋನಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಜಾರ್ಖಂಡ್‌ ಮೂಲದ ಆಟಗಾರ ವಿಕೆಟ್‌ ಕೀಪಿಂಗ್‌ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದರು.

ಆದರೂ, ದಿನೇಶ್‌ ಕಾರ್ತಿಕ್‌ ಅವರು ಸಿಕ್ಕ ಅವಕಾಶಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಟೀಮ್‌ ಇಂಡಿಯಾದಲ್ಲಿ ನಿಯಮಿತವಾಗಿ ಆಡುವಲ್ಲಿ ವಿಫಲರಾಗಿದ್ದರು. ಎಂಎಸ್‌ ಧೋನಿ ನಾಯಕತ್ವದಲ್ಲಿ 2007ರ ಉದ್ಘಾಟನಾ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿ ದಿನೇಶ್‌ ಕಾರ್ತಿಕ್‌ ಸದಸ್ಯರಾಗಿದ್ದರು.

ಅಲ್ಲದೆ, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದಲ್ಲಿಯೂ ದಿನೇಶ್‌ ಕಾರ್ತಿಕ್‌ ಇದ್ದರು. ದಿನೇಶ್‌ ಕಾರ್ತಿಕ್‌ ಅವರ ವೃತ್ತಿ ಜೀವನದ ಸ್ಮರಣೀಯ ಪಂದ್ಯ ಎಂದರೆ ಅದು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ನಿದಹಾಸ್‌ ತ್ರಿಕೋನ ಸರಣಿಯ ಫೈನಲ್‌ ಹಣಾಹಣಿ ಎಂದೇ ಹೇಳಬಹುದು.

ಶ್ರೀಲಂಕಾದಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ 18 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿತ್ತು. ಈ ವೇಳೆ ಕೊನೆಯ ಎರಡು ಓವರ್‌ಗಳಿಗೆ ಭಾರತಕ್ಕೆ 35 ರನ್‌ ಅಗತ್ಯವಿತ್ತು.

19ನೇ ಓವರ್‌ ಬೌಲಿಂಗ್‌ ಮಾಡಿದ ರುಬೆಲ್‌ ಹೊಸೈನ್‌ ಅವರಿಗೆ ದಿನೇಶ್‌ ಕಾರ್ತಿಕ್‌ 22 ರನ್‌ಗಳನ್ನು ಸಿಡಿಸಿದರು. ನಂತರ ಕೊನೆಯ ಓವರ್‌ನಲ್ಲಿ ಭಾರತಕ್ಕೆ 12 ರನ್‌ ಅಗತ್ಯವಿತ್ತು. ಅದರಂತೆ ಕಾರ್ತಿಕ್‌ ಸ್ಪೋಟಕ ಬ್ಯಾಟಿಂಗ್‌ ಮಾಡಿ ಭಾರತವನ್ನು ಸುಲಭವಾಗಿ ಗೆರೆ ಮುಟ್ಟಿಸಿದರು. ಆ ಮೂಲಕ ಭಾರತ ನಿದಹಾಸ್‌ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

LEAVE A REPLY

Please enter your comment!
Please enter your name here